ನರಕ
ಪಾಪ ಮಾಡಿದವರು ಯಾತನೆಗಳನ್ನು ಅನುಭವಿಸುವ ಸ್ಥಾನ. ಇದನ್ನು ಒಂದು ಲೋಕವೆಂದು ಕರೆಯುತ್ತಾರೆ. ವಹ್ನಿ ಪುರಾಣ, ದೇವೀಪುರಾಣ, ವರಾಹಪುರಾಣ, ಪದ್ಮಪುರಾಣ ಮತ್ತು ವಿಷ್ಣುಪುರಾಣ ಈ ಪುರಾಣಗಳಲ್ಲಿ ಇದರ ವಿವರ ವಿಸ್ತಾರವಾಗಿದೆ.

ಯಾಜ್ಞವಲ್ಕ್ಯರು ತಿಳಿಸಿರುವಂತೆ, ಶ್ರುತಿಸ್ಮøತ್ಯಾದಿಗಳಲ್ಲಿ ತಮತಮಗೆ ವಿಹಿತವಾಗಿರುವ ಕೃತ್ಯಗಳನ್ನು ಮಾಡದವರು, ನಿಷಿದ್ಧ ಕಾರ್ಯಗಳನ್ನು ಮಾಡುವವರು, ಇಂದ್ರಿಯನಿಗ್ರಹವಿಲ್ಲದವರು-ಈ ಮೂರು ಪಂಗಡದವರನ್ನು ಸತ್ತ ಬಳಿಕ ಯಮ ಕಿಂಕರರು ಎಳೆದೊಯ್ದು ನರಕಕ್ಕೆ ತಳ್ಳುತ್ತಾರೆ. ನರಕ ಲೋಕಕ್ಕೆ ಅಧಿಪತಿ ಯಮ. 

ಗತ್ಯಂತರವಿಲ್ಲದೆ ಕಾರಣಾಂತರದಿಂದ ನಿಷಿದ್ಧ ಕಾರ್ಯಗಳನ್ನು ಒಂದು ವೇಳೆ ಮಾಡಿದ್ದರೂ ಆ ದುಷ್ಕøತ್ಯ ಫಲ ನಿವಾರಣೆಗಾಗಿ ಧರ್ಮಶಾಸ್ತ್ರ ಗ್ರಂಥಗಳಲ್ಲಿ ತಿಳಿಸಿರುವ ಪ್ರಾಯಶ್ಚಿತ್ತವನ್ನು ಮಾಡಿಕೊಂಡರೆ ನರಕಯಾತನೆಯನ್ನು ತಪ್ಪಿಸಿಕೊಳ್ಳಬಹುದು.

ತಾವು ಮಾಡಿದ ದುಷ್ಕøತ್ಯಗಳಿಗೆ ಪಶ್ಚಾತ್ತಾಪ ಪಡದವರೂ ಪ್ರಾಯಶ್ಚಿತ್ತ ಮಾಡಿಕೊಳ್ಳದವರೂ ದಾರುಣವೂ ಕಷ್ಟಕರವೂ ಆದ ನರಕಕ್ಕೆ ಬೀಳುತ್ತಾರೆ.

ತಾಮಿಸ್ರ ಲೋಹಶಂಕು ಮಹಾನಿಶಯ ಶಾಲ್ಮಲೀ ರೌರವ ಕುಡ್ಮಲ ಪೂತಿಮೃತ್ತಿಕ ಕಾಲಸೂತ್ರಕ ಸಂಘಾತ ಲೋಹಿತೋದ ಸವಿಷ ಸಂಪ್ರಪಾತನ ಮಹಾನರಕ ಕಾಕೋಲ ಸಂಜೀವನ ಮಹಾಪಥ ಅವೀಚಿ ಅಂಧತಾಮಿಸ್ರ ಕುಂಭೀಪಾಕ ಅಸಿಪತ್ರ ವನತಾಪನ ಎಂಬ ಇಪ್ಪತ್ತೊಂದು ನರಕಗಳನ್ನು ಯಾಜ್ಞವಲ್ಕ್ಯರು ಹೇಳಿರುತ್ತಾರೆ.

ಸ್ವರ್ಗದಲ್ಲಿರುವಷ್ಟೇ ಪ್ರಾಣಿವೈವಿಧ್ಯ ನರಕಲೋಕದಲ್ಲೂ ಉಂಟು. ನರಕದಲ್ಲಿರುವವರು ತಾವು ತಲೆಕೆಳಗಾಗಿದ್ದು ದೇವಲೋಕದಲ್ಲಿರುವ ದೇವತೆಗಳನ್ನು ನೋಡುತ್ತಾರೆ.

ಅಮರಸಿಂಹ ತನ್ನ ಅಮರಕೋಶದ ನರಕವರ್ಗದಲ್ಲಿ ತಪನಾ ವೀಚೀ ಮಹಾರೌರವ ರೌರವ ಸಂಘಾತ ಕಾಲಸೂತ್ರ ಎಂಬ ನರಕಗಳ ಹೆಸರುಗಳನ್ನು ಮಾತ್ರ ತಿಳಿಸಿರುತ್ತಾನೆ.

ವಹ್ನಿಪುರಾಣದಂತೆ ನರಕಗಳ ಸಂಖ್ಯೆ ಇಪ್ಪತ್ತೆಂಟು ಕೋಟಿ. ದೇವೀಪುರಾಣದಂತೆ ಐವತ್ತು ಕೋಟಿ. ಇವುಗಳಲ್ಲಿ ನಲವತ್ತು ನರಕಗಳು ಮಾತ್ರ ಮುಖ್ಯವಾದುವು.

ನರಕ ಸರ್ವಕಾಲದಲ್ಲೂ ಯಾತನೆಯನ್ನನುಭವಿಸುವ ಪಾಪಿಷ್ಠರ ಹಾಹಾಕ್ರಂದನ ಧ್ವನಿಯಿಂದ ಕೂಡಿರುತ್ತದೆ.

ನರಕ ಯಾತನಾಸ್ಥಾನವನ್ನು ನರಕಕುಂಡವೆಂದು ಕರೆಯುತ್ತಾರೆ. ಬ್ರಹ್ಮವೈವರ್ತಪುರಾಣದಲ್ಲಿ ತಿಳಿಸಿರುವಂತೆ ಈ ನರಕಕುಂಡಗಳ ಸಂಖ್ಯೆ ಎಂಬತ್ತಾರು.

ವಹ್ನಿಕುಂಡ ತಪ್ತಕುಂಡ ಕ್ಷಾರಕುಂಡ ವಿಟ್‍ಕುಂಡ ಮೂತ್ರಕುಂಡ ಶ್ಲೇಷ್ಮಕುಂಡ ಗರಕುಂಡ ದೂಷಿಕಾಕುಂಡ ವಸಾಕುಂಡ ಶುಕ್ರಕುಂಡ ಅಸೃತ್‍ಕುಂಡ ಅಶ್ರುಕುಂಡ ಗಾತ್ರಮಲಕುಂಡ ಕರ್ಣವಿಟ್‍ಕುಂಡ ಮಜ್ಝಾಕುಂಡ ಮಾಂಸಕುಮಡ ನಖಕುಂಡ ಲೋಮಕುಂಡ ಕೇಶಕುಂಡ ಅಸ್ಥಿಕುಂಡ ತಾಮ್ರಕುಂಡ ಲೌಹಕುಂಡ ತೀಕ್ಷ್ಣಕಂಟಕ ಕುಂಡ ವಿಷಕುಂಡ ಘರ್ಮಕುಂಡ ತಪ್ತಸುರಾಕುಂಡ ಪ್ರತಪ್ತತೈಲಕುಂಡ ಕುಂತಕುಂಡ ಕೃಮಿಕುಂಡ ಪೂಯಕುಂಡ ಸರ್ಪಕುಂಡ ಮಶಕಕುಂಡ ದಂಶಕುಂಡ ಗರಲಕುಂಡ ವಜ್ರದಂಷ್ಟ್ರಕುಂಡ ವೃಶ್ಚಿಕಕುಂಡ ಶರಕುಂಡ ಶೂಲಕುಂಡ ಖಡ್ಗಕುಂಡ ಗೋಲಕುಂಡ ನಕ್ರಕುಂಡ ಕಾಕಕುಂಡ ಸಂಚಾನಕುಂಡ ವಾಜಕುಂಡ ವಜ್ರಕುಂಡ ತಪ್ತಪಾಷಾಣಕುಂಡ ತೀಕ್ಷ್ಣಪಾಷಾಣಕುಂಡ ಲಾಲಾಕುಂಡ ಮಸೀಕುಂಡ ಚೂರ್ಣಕುಂಡ ಚಕ್ರಕುಂಡ ವಕ್ರಕುಂಡ ಕೂರ್ಮಕುಂಡ ಜ್ವಾಲಾಕುಂಡ ಭಸ್ಮಕುಂಡ ದಗ್ಧಕುಂಡ ತಪ್ತಶೂರ್ಮಿಕುಂಡ ಅಸಿಪತ್ರಕುಂಡ ಸೂಚೀಮುಖಕುಂಡ ಗೋಧಾವುಖಕುಂಡ ನಕ್ರಮುಖಕುಂಡ ಗಜದಂಶಕುಂಡ ಗೋಮುಖಕುಂಡ ಕುಂಭೀಪಾಕಕುಂಡ ಕಾಲಸೂತ್ರಕುಂಡ ಅವಟೋದಕುಂಡ ಅರುಂತುದಕುಂಡ ಪ್ರಾಂಶುಭೋಜಕುಂಡ ಪಾಳವೇಷ್ಟಕುಂಡ ಶೂಲಪೋತಕುಂಡ ಪ್ರಕಂಪನಕುಂಡ ಉಲ್ಕಾಮುಖಕುಂಡ ಅಕೂಪಕುಂಡ ವೇಧನಕುಂಡ ದಂಡತಾತನಕುಂಡ ಜಾಲಬದ್ಧಕುಂಡ ದೇಹಚೂರ್ಣಕುಂಡ ದಲನಕುಂಡ ಶೋಷಣಕುಂಡ ಕಷಕುಂಡ ಸೂರ್ಪಕುಂಡ ಜ್ವಾಲಾಮುಖಕುಂಡ ಜಿಹ್ಮಕುಂಡ ಧೂಮಾಂಧಕುಂಡ ನಾಗವೇಷ್ಟನಕುಂಡ-ಇವೇ ಎಂಬತ್ತಾರು ನರಕ ಕುಂಡಗಳು.

ಕೊಡುತ್ತೇನೆಂದು ಸಂಕಲ್ಪಿಸಿ ಅದನ್ನು ಮತ್ತೊಬ್ಬರಿಗೂ ತಿಳಿಸಿ ಬಳಿಕ ಕೊಡದಿದ್ದರೆ ಆತ ಕುಂಭೀಪಾಕ ಎಂಬ ನರಕದಲ್ಲಿ ಬೀಳುತ್ತಾನೆ. ಮದ್ಯಪಾನ ಮಾಡಿದವನಿಗೆ ಯಮಕಿಂಕರರು ಕಾದ ಕಬ್ಬಿಣದ ರಸವನ್ನು ಕುಡಿಸುತ್ತಾರೆ. ಲೋಕವನ್ನು ವಂಚಿಸಲು ಧೂರ್ತನಾಗಿ, ಜಂಭಾಹಂಕಾರಗಳಿಂದ ಕೂಡಿದವರನ್ನು ಆಶ್ರಯಿಸುವವರನ್ನು ಯಮಕಿಂಕರು ಹೊಡೆದು ವೈಶಸ ನರಕಕ್ಕೆ ತಳ್ಳುತ್ತಾರೆ. ವಿಶ್ವಾಸ ಘಾತಕ ಶೂಲಪ್ರೋತವೆಂಬ ನರಕದಲ್ಲಿ ಬಿದ್ದು ಯಾತನೆಯನ್ನನುಭವಿಸುತ್ತಾನೆ. ಮಹಾರೌರವ ಎಂಬ ನರಕ ಮೂವತ್ತೈದು ಸಹಸ್ರ ಯೋಜನೆ ವಿಸ್ತೀರ್ಣ ಉಳ್ಳದ್ದಾಗಿದೆ. ತಳ ತಾಮ್ರಮಯವಾಗಿದ್ದು ಅದು ಅಗ್ನಿಯಿಂದ ಚೆನ್ನಾಗಿ ಕಾದಿರುತ್ತದೆ. ತಪ್ಪು ಮಾಡಿದವನ ಕೈಕಾಲುಗಳನ್ನು ಕಟ್ಟಿ ಆ ಕಾಯ್ದ ತಾಮ್ರದ ಮೇಲೆ ಯಮಕಿಂಕರರು ಎಳೆಯುತ್ತಾರೆ. ಮಧ್ಯದಲ್ಲಿ ಆತನನ್ನು ಬಿಟ್ಟು ಕಟ್ಟುಗಳನ್ನು ಬಿಚ್ಚುತ್ತಾರೆ. ಕಾಗೆ, ಗೂಬೆ, ಸೊಳ್ಳೆ, ತೋಳ, ಕೋಳಿ ಇವು ಅವನನ್ನು ಕಚ್ಚುತ್ತವೆ. ಬಾಧೆಗೊಳಗಾದ ಆತ ಗೋಳಾಡುತ್ತಾನೆ.

ಗುರುಪತ್ನೀಭೋಗಮಾಡಿದವನನ್ನು ಕುದಿಯುವ ಎಣ್ಣೆಯಲ್ಲಿ ತಳ್ಳುತ್ತಾರೆ. ಸೊಸೆ ಅಥವಾ ಮಗಳ ಸಂಗಮ ಮಾಡಿದವನನ್ನು ಅಗ್ನಿಗೆ ತಳ್ಳುತ್ತಾರೆ. ಗುರುವಿನಿಂದ ವೇದದೂಷಣೆ ದೇವ ದ್ವಿಜ ಪಿತೃದೋಷ-ಇವನ್ನು ಮಾಡಿದವ ವಿವಿಧ ಕ್ರಿಮಿಗಳಿಗೆ ಆಹಾರವಾಗುತ್ತಾನೆ. ವಿನಾಕಾರಣ ವನವನ್ನು ಛೇದಿಸುವವ ಅಸಿಪತ್ರವನವೆಂಬ ನರಕದಲ್ಲಿ ಬೀಳುತ್ತಾನೆ. ಪರವಿತ್ತ ಪರಕಳತ್ರ ಪರಾಪತ್ಯವನ್ನು ಅಪಹರಿಸಿದವ ಮರಣಾನಂತರ ತಾಮಿಸ್ರವೆಂಬ ನರಕದಲ್ಲಿ ಬೀಳುತ್ತಾನೆ. ಪ್ರಾಣಿವಧೆ ಮಾಡುವವನಿಗೆ ರೌರವನರಕ ಪ್ರಾಪ್ತಿಯಾಗುತ್ತದೆ. ತನ್ನ ಬಲದಿಂದ ಬ್ರಾಹ್ಮಣರ ಧನ ಮತ್ತು ಗೋಗಳನ್ನು ಅಪಹರಿಸಿದವ ಅಂಧಕೂಪವೆಂಬ ನರಕದಲ್ಲಿ ಬೀಳುತ್ತಾನೆ. ದೇವರಿಗೆ ನಿವೇದಿಸದೆ ಸ್ನೇಹಿತರಿಗೆ ಕೊಡದೆ ನಾಲಗೆಯ ಚಾಪಲ್ಯಕ್ಕೆ ಬಲಿಯಾಗಿ ತಾನೊಬ್ಬನೇ ತಿನ್ನುತ್ತಾನೋ ಅಂಥವ ಕೃಮಿಭೋಜನ ಎಂಬ ನರಕಕ್ಕೆ ಬೀಳುತ್ತಾನೆ. ಪುತ್ರಸಂತಾನ ಇಲ್ಲದವರು ಪುನ್ ಎಂಬ ನರಕದಲ್ಲಿ ಬೀಳುತ್ತಾರೆ.
ಪಶುವಧೆ ಮಕ್ಕಳ ಕೊಲೆ ಸುಳ್ಳು ಹೇಳುವುದು ಮನೆಹಾಳುತನ ಪರಸ್ವಾಹಪಾರ ಪರಧನನಾಶ ಸ್ನೇಹಿತನಿಗೆ ಕೃತಘ್ನನಾಗುವುದು ಸತ್ಕರ್ಮದೂಷಣೆ ಮೋಸ ಮಾಡುವುದು ಮತ್ತೊಬ್ಬರ ವೃತ್ತಿಯನ್ನು ಹಾಳುಮಾಡುವುದು ದ್ಯೂತವಾಡುವುದು ವೇದವಿಕ್ರಯ ವೇದದೂಷಣೆ ವಿಷವಿಕ್ರಯ ಕ್ಷೀರವಿಕ್ರಯ ವರ್ಣಾಶ್ರಮಧರ್ಮತ್ಯಾಗ, ತಸ್ಕರವೃತ್ತಿ ಮಕ್ಕಳು ವೃದ್ಧರು ಮತ್ತು ದಾಸರ ಎದುರಿನಲ್ಲಿ ಅವರಿಗೆ ಕೊಡದೆ ತಿನ್ನುವುದು ಸುಳ್ಳುಸಾಕ್ಷಿ ಹೇಳುವುದು ಭ್ರೂಣಹತ್ಯೆ (ಗರ್ಭಸ್ರಾವ) ಪಶುಹತ್ಯೆ ಬ್ರಹ್ಮಹತ್ಯೆ ಸುವರ್ಣಸ್ತೇಯ-ಇವೇ ಮೊದಲಾದ ಪಾತಕಗಳನ್ನು ಮಾಡುವವರು ನರಕಭಾಜನ ರಾಗುತ್ತಾರೆ. ಈ ಪಾತಕಿಗಳ ಸಂಸರ್ಗವನ್ನು ಹೊಂದಿರುವವರೂ ನರಕವಾಸಿಗಳಾಗುತ್ತಾರೆ.							(ಎಸ್.ಎನ್.ಕೆ.)

ಪಾಶ್ಚಾತ್ಯರ ದೃಷ್ಟಿಯಲ್ಲಿ ನರಕದ ಕಲ್ಪನೆ ಹೇಗೆ ಮೂಡಿಬಂದಿದೆಯೆಂಬುದನ್ನು ಈಗ ನೋಡಬಹುದು. ಯೆಹೂದಿಗಳ ಧರ್ಮ ಕ್ರೈಸ್ತಧರ್ಮಕ್ಕಿಂತ ಹಿಂದಿನದು. ಕ್ರಿ.ಪೂ. 6ನೆಯ ಶತಮಾನದಲ್ಲಿ ಅವರು ಬ್ಯಾಬಿಲೋನಿಯಾಕ್ಕೆ ರಾಜ್ಯಭ್ರಷ್ಟರಾಗಿ ಹೋಗುವವರೆಗೂ ಅವರಲ್ಲಿ ಮರಣಾನಂತರದ ಜೀವನದ ಬಗೆಗೆ ಕೇವಲ ಅನಿರ್ದಿಷ್ಟ ಹಾಗೂ ಅಸ್ಪಷ್ಟ ಭಾವನೆಗಳೇ ಇದ್ದವು. ಬೈಬಲಿನ ಹಳೆಯ ಒಡಂಬಡಿಕೆಯಲ್ಲಿ ಷಿಓಲ್ ಎಂಬ ಶಬ್ದ ಅನೇಕ ಕಡೆ ಬರುತ್ತದೆ. ಅದನ್ನು ಸಾಮಾನ್ಯವಾಗಿ ಅನುವಾದಕರು ನರಕವೆಂದು ಭಾಷಾಂತರಿಸುತ್ತಾರೆ. ಆದರೂ ಆ ಶಬ್ದಕ್ಕೆ ಮೊದಲಿದ್ದ ಅರ್ಥ ಸಾಮಾನ್ಯವಾದ ಸಮಾಧಿ ಎಂದೇ ಇದ್ದಿರಬಹುದೆಂದು ವಿದ್ವಾಂಸರು ಊಹಿಸುತ್ತಾರೆ. ಮಿಕ್ಕ ಎಷ್ಟೋ ಪ್ರಾಚೀನ ಮಾನವಜನಾಂಗಗಳಂತೆ ಯೆಹೂದಿಗಳೂ ಮನುಷ್ಯ ಮರಣಾನಂತರ ತನ್ನ ಸಮಾಧಿಯಲ್ಲಿಯೇ ವಿಶ್ರಮಿಸುತ್ತಾನೆಂದು ತಿಳಿದಿದ್ದಿರಬೇಕೆನಿಸುತ್ತದೆ. ಅಲ್ಲದೆ ಯೆಹೂದಿ ಧರ್ಮಾನುಯಾಯಿಗಳಂತೆ ಅಧರ್ಮಾನುಯಾಯಿಗಳಲ್ಲದವರಿಗೂ ಸಮಾನವಾಗಿಯೇ ಮರಣಾನಂತರ ಷಿಓಲ್ ಎಂಬ ಗುಹೆಯ ವಾಸ ಪ್ರಾಪ್ತವಾಗುತ್ತದೆಂದು ಹೇಳುವ ವಚನಗಳೂ ಕಾಣಬರುತ್ತವೆ. ಈ ಗುಹಾವಾಸಿಗಳು ಕೇವಲ ನೆರಳುಗಳಾಗಿರುವರೆಂದೂ ಚೈತನ್ಯಾಂಶದಿಂದ ಚ್ಯುತರಾಗಿರುವರೆಂದೂ ಗಾಢತಮಸ್ಸಿನಿಂದ ಆ ಗುಹೆಗಳು ಆವೃತವಾಗಿರುವುದೆಂದೂ ಅಲ್ಲಲ್ಲಿ ವರ್ಣಿತವಾಗಿದೆ.

ಕ್ರಿಸ್ತಪೂರ್ವ 5ನೆಯ ಶತಮಾನದ ಬಳಿಕ ಯೆಹೂದಿಗಳಿಗೆ ಪರ್ಷಿಯನರ ಹಾಗೂ ಗ್ರೀಕರ ಸಂಪರ್ಕ ಉಂಟಾಯಿತು. ಪರ್ಷಿಯನ್ ಸಾಮ್ರಾಜ್ಯದಲ್ಲಿ ಪ್ರಚಲಿತವಿದ್ದ ಜರತುಷ್ಟ್ರ ಧರ್ಮದ ಪ್ರಕಾರ ಮರಣಾನಂತರ ಭಗವಂತನಿಂದ ಜೀವದ ಪರೀಕ್ಷೆ ಜರುಗಿ, ಒಳ್ಳೆಯ ಜೀವಕ್ಕೆ ಪ್ರಕಾಶಮಯವಾದ ಭಗವಲ್ಲೋಕ ಪ್ರಾಪ್ತಿಯೂ ಕೆಟ್ಟ ಅಥವಾ ಪಾಪಿ ಜೀವಕ್ಕೆ ನರಕವೆಂಬ ಅಧೋಲೋಕದ ದುರ್ಗತಿಯೂ ಉಂಟಾಗುತ್ತಿದ್ದವು. ಆಗ ಗ್ರೀಸಿನಲ್ಲಿ ಪ್ರಭಾವಿಯಾಗಿದ್ದ ಆರ್ಫಿಕ್ ಪಂಥಗಳು ಮಾತ್ರ ಜೀವ ಅಮತ್ರ್ಯವೆಂಬುದನ್ನೇ ಒತ್ತಿ ಹೇಳುತ್ತಿದ್ದವು. ಈ ಜೀವಾಮೃತತ್ವವಾದವನ್ನೇ ಪ್ಲೇಟೋ ತನ್ನ ಗ್ರಂಥಗಳಲ್ಲಿ ತುಂಬ ಬೆಳೆಸಿ ವಿವೇಚಿಸಿದ್ದಾನೆ.

ಆದರೆ ಕ್ರಿಸ್ತನ ಜನನಕಾಲಕ್ಕೆ ಆಗಲೇ ಯೆಹೂದಿಗಳು ಮರಣಾನಂತರದಲ್ಲಿ ಪಾಪಿಜೀವಗಳು ಗೆಹೆನ್ನಾ ಎಂಬ ನರಕಲೋಕದಲ್ಲಿ ಚಿರಕಾಲ ಶಿಕ್ಷೆಗೆ ಗುರಿಯಾಗುವವೆಂಬ ವಿಚಾರವನ್ನು ಪುರಸ್ಕರಿಸತೊಡಗಿದ್ದರು. ಗೆಹೆನ್ನಾ ಎಂಬುದು ಜೆರೂಸಲೇಮ್ ನಗರದ ಬಳಿಯ ಹಿನ್ನೋಮ್ ಎಂಬ ಕಣಿವೆಯಲ್ಲಿ ತುಂಬಿದ್ದ ತಿಪ್ಪೆಯ ರಾಶಿಯನ್ನುದ್ದೇಶಿಸಿ ಹುಟ್ಟಿದ ಶಬ್ದವೆಂದು ವಿದ್ವಾಂಸರು ಸಂಶೋಧಿಸಿದ್ದಾರೆ.

ಕ್ರೈಸ್ತಧರ್ಮದಲ್ಲಿ ನರಕದ ಕಲ್ಪನೆ ತುಂಬ ಪ್ರಚುರವಾಗಿದೆ. ಸಾಮಾನ್ಯವಾಗಿ ಪಾಶ್ಚಾತ್ಯರು ಎಲ್ಲರೂ ನರಕವೆಂದರೆ ತೋರುವ ಭಾವನೆಗಳೆಲ್ಲ ಅಲ್ಲಿಂದಲೇ ಮೂಡಿಬಂದಿವೆಯೆಂದರೂ ಎನ್ನಬಹುದು. ಆ ಸಾಮಾನ್ಯಭಾವನೆಗಳಿವು. ನರಕ ಪಾಪಿಜೀವಿಗಳ ನಿವಾಸಸ್ಥಾನ; ಅದು ಪಾತಾಳದಲ್ಲಿದ್ದು ಸೈತಾನನೇ ಅದರ ಸಾರ್ವಭೌಮ. ಭ್ರಷ್ಟರಾದ ಪಾಪಿಜೀವಗಳೆಲ್ಲ ಮರಣಾನಂತರ ಅಲ್ಲಿಗೆ ಹೋಗಿ ಶಿಕ್ಷೆಯನ್ನು ಅನುಭವಿಸಲಾರಂಭಿಸುವರು. ಅದಮನಿಂದಲೇ ಉಂಟಾದ ಪಾಪ ಲೇಪವಿರಲಿ, ಅದಕ್ಕೂ ಹೆಚ್ಚಾಗಿ ದೇವರ ನಿಯಮಗಳನ್ನು ಉಲ್ಲಂಘಿಸಿ ಸಂಚಿತವಾದ ಪಾಪಸಂಚಯವೇ ಇರಲಿ, ಅದಕ್ಕೆಲ್ಲ ನರಕಶಿಕ್ಷೆ ಕಟ್ಟಿಟ್ಟದ್ದೇ. ಭೂತಳದ ಆಳದಲ್ಲಿ ಗಾಢಾಂಧಕಾರ ತುಂಬಿದ ಮತ್ತು ಸದಾ ಭುಗಿಲೆಂದುರಿಯುತ್ತಿರುವ ಭಯಂಕರ ಬೆಂಕಿಗಳಿರುವ ಲೋಕವೇ ಈ ನರಕ. ನಮಗೆ ಒಮ್ಮೊಮ್ಮೆ ಜ್ವಾಲಾಮುಖಿಯಂತೆ ಭೂಮಿ ಬಾಯ್ಬಿಟ್ಟು ಕಾರಿದಾಗ ಬರುವ ಸಾಮಗ್ರಿಯೆಲ್ಲ ಈ ನರಕದಿಂದ ಬಂದುದೇ.

ಇದರಂತೆ ಆಲಂಕಾರಿಕವಾಗಿಯೂ ನರಕ ಶಬ್ದವನ್ನು ಯಾವುದೇ ಉತ್ಕಟವಾದ ಕ್ರೌರ್ಯ, ದುಃಖ, ದುರ್ಭರಪೀಡೆಗಳಿಗೆ ಕೂಡ ಅನ್ವಯಿಸುವಂತೆ ಪ್ರಯೋಗಿಸುವ ರೂಢಿಯಿದೆ. ತಪ್ಪುಮಾಡಿದ ಮೇಲೆ ಬರುವ ಅಪಾರ ಪಶ್ಚಾತ್ತಾಪ ಮತ್ತು ಕೊರಗನ್ನು ಕೂಡ ಮಿಲ್ಟನ್ ಮಹಾಕವಿ ನರಕವೆಂದೇ ಪರಿಗಣಿಸಿದ್ದಾನೆ. ಆದರೆ ಈ ಲೇಖನದಲ್ಲಿ ನರಕದ ಪಾರಿಭಾಷಿಕ ಅರ್ಥವನ್ನು ಮಾತ್ರ ಗಮನಿಸಲಾಗಿದೆ.

ನಾನೆತ್ತ ಹಾರಿದರೆ ಅತ್ತಲೆಲ್ಲ ನರಕ; ನಾನೇ ನಿಜಕ್ಕೂ ನರಕ-ಎಂಬ ಕ್ರೈಸ್ತ ಮನೋಭಾವ ಪಾಶ್ಚಾತ್ಯರಿಗೆಲ್ಲ ಗ್ರಾಹ್ಯವಾಗಲು ಬೈಬಲ್ಲಿನ ಮಹಾಪ್ರಭಾವವೇ ಕಾರಣವೆನ್ನಬೇಕು.

ಗ್ರೀಕರಿಗೆ ಮರಣಾನಂತರ ಸ್ವರ್ಗ-ನರಕಗಳೆಂಬ ಎರಡು ಭಿನ್ನಲೋಕಗಳಿರುವ ಕಲ್ಪನೆ ಸ್ಪಷ್ಟವಾಗಿರಲಿಲ್ಲ. ಎಕ್ಲಿಸಿಯಾಸ್ಟ್ಸ್ ಎಂಬ ಗ್ರಂಥವನ್ನು ಬರೆದಾತ ಕೂಡ ಸತ್ತವರೆಲ್ಲ ಒಳ್ಳೆಯವರಿರಲಿ, ಕೆಟ್ಟವರಿರಲಿ-ಒಂದೇ ಹೇಡೀಸ್ ಎಂಬ ಲೋಕಕ್ಕೈದುವರೆಂದು ಬರೆದಿದ್ದಾನೆ. ಎಲ್ಲರಿಗೂ ಮರಣಾನಂತರ ಒಂದೇ ಗತಿಯೆಂಬುದು ಅಂದಿನ ಗ್ರಹಿಕೆಯಾಗಿತ್ತು. ನರಕವೆಂದರೆ ಶಿಕ್ಷಾಸ್ಥಾನವೆಂಬ ಕಲ್ಪನೆ ಅತ್ಯಂತ ಪ್ರಾಚೀನವಾದುದಾಗಿರದೆ, ಶತಶತಮಾನಗಳ ಅನಂತರ ಮೂಡಿ ಬಂದ ಒಂದು ನವೀನ ಶ್ರದ್ಧಾಪರಂಪರೆಯೆಂದೇ ಭಾವಿಸಬಹುದು. ಐಹಿಕವಾದ ಸತ್ಕಾರ್ಯಗಳಿಗೆ ಬಹುಮಾನವನ್ನೂ ಅಸತ್ಕಾರ್ಯಗಳಿಗೆ ಶಿಕ್ಷೆಯನ್ನೂ ಪರದಲ್ಲಿ ಕೊಡುವುದು ಪರಮ ನ್ಯಾಯಾಧೀಶನಾಗಿರುವ ದೇವರ ಕೆಲಸವೆಂಬ ಧಾರ್ಮಿಕ ವಿಚಾರದಲ್ಲಿ ಕ್ರೈಸ್ತರ ಚಿಂತನೆಯೇ ಸ್ವರ್ಗ-ನರಕಗಳ ವ್ಯವಸ್ಥಿತ ಕಲ್ಪನೆಗೆ ಮೂಲಾಧಾರವಾಗಿದೆ.

ತಾನು ಬಿತ್ತಿದ್ದನ್ನೇ ತಾನು ಕೊಯ್ಯಬಹುದು; ತಾನು ಮಾಡಿದ್ದನ್ನು ತಾನೇ ಉಣ್ಣಬೇಕು ಎಂಬ ನೀತಿತತ್ತ್ವವೂ ಈ ಚಿಂತನೆಗೆ ಪ್ರಯೋಜಕವಾಗಿದೆ. ಐಹಿಕ ಜೀವನದಲ್ಲಿ ಮಾಡಿದ ಪಾಪಕ್ಕೆ ಯಾವ ಶಿಕ್ಷೆಯೂ ಒದಗದೆ ಹೋದಾಗ, ದೇವರ ನ್ಯಾಯನಿಷ್ಠೆಯುಳಿಯಬೇಕಾದರೆ ಪರಲೋಕದಲ್ಲಾದರೂ ನರಕಶಿಕ್ಷೆಯನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ನರಕವನ್ನು ಕುರಿತು ಸಾಮಾನ್ಯವಾಗಿ ಕ್ಯಾತೊಲಿಕ್ ಮತ್ತು ಪ್ರಾಟೆಸ್ಟಂಟ್ ಮೊದಲಾದ ಎಲ್ಲ ಕ್ರೈಸ್ತ ಪಂಗಡಗಳೂ ಒಪ್ಪುವ ವಿಚಾರಧಾರೆಯನ್ನು ಹೀಗೆ ಸಂಗ್ರಹಿಸಬಹುದು: ತಪ್ಪು; ಅಧರ್ಮ ಮುಂತಾದ ಅಕಾರ್ಯಗಳಲ್ಲಿ ನಿರತರಾದವರನ್ನು, ಭಗವಂತನು ದ್ರೋಹಿಗಳನ್ನು, ದಯಾದಾಕ್ಷಿಣ್ಯಗಳ ಲವಲೇಶವೂ ಇಲ್ಲದೆ ಕಟುತರವಾಗಿ ಶಿಕ್ಷಿಸಲೆಂದು ದೇವರೇ ಕಲ್ಪಿಸಿರುವ ಶಿಕ್ಷಾಸ್ಥಾನವೇ ನರಕ. ಧರ್ಮದಿಂದ ಪತಿತರಾದವರಿಗೆಲ್ಲ ನರಕಶಿಕ್ಷೆ ನಿರಂತರವಾದಂಥದು. ಅದಕ್ಕೆ ಕಡೆಯೆಂಬುದೇ ಇಲ್ಲ. ಒಮ್ಮೆ ನರಕ ಪ್ರವೇಶ ಮಾಡಿದ ಜೀವಕ್ಕೆ ಮತ್ತೆ ಬಿಡುಗಡೆಯ ಶಕ್ಯತೆಗೇ ಅವಕಾಶವಿಲ್ಲ. ಈ ಅನಂತವಾದ ನರಕಶಿಕ್ಷೆಯೆಂಬ ವಿಚಾರಧಾರೆಯನ್ನು ಪ್ರತಿಭಟಿಸಲು ಯತ್ನಿಸಿದ ಕ್ರೈಸ್ತಧರ್ಮೀಯರೂ ಇಲ್ಲದೆ ಇಲ್ಲ. ಶಿಕ್ಷೆಗೊಂದು ಪರಿಮಿತಿಯನ್ನು ಹಾಕಿ, ಪಶ್ಚಾತ್ತಾಪದ ಪರಮಾವಧಿಯಾದ ಮೇಲಾದರೂ ಮುಕ್ತಿಗೆ ಮಾರ್ಗ ಮಾಡಿಕೊಡಬೇಕೆಂದು ಅನೇಕ ಕ್ರೈಸ್ತ ವಿದ್ವಾಂಸರು ವಾದಿಸಿ ಬರೆದಿದ್ದಾರೆ. ಆದರೆ ಪರಂಪರಾಬದ್ಧರಾದ ಕ್ಯಾತೊಲಿಕ್ ಗುರುಗಳ ಪರಮ ಸಿದ್ಧಾಂತದಲ್ಲಿ ಈ ಹೊಸ ವಿಚಾರಗಳಾವುದಕ್ಕೂ ಬೆಲೆಯಿಲ್ಲ. ಎಡೆಯೂ ಇಲ್ಲ. ಕ್ರಿ.ಶ. 19ನೆಯ ಶತಮಾನದ ಕಡೆಯ ವೇಳೆಗೆ ಚರ್ಚ್ ಆಫ್ ಇಂಗ್ಲೆಂಡಿಗೆ ಸೇರಿದ ಧರ್ಮಾಧಿಕಾರಿಗಳು ಜೀವದ ಅನಂತ ನರಕಶಿಕ್ಷೆಯನ್ನು ಪ್ರಚಾರ ಮಾಡಬೇಕಾಗಿಲ್ಲವೆಂಬುದಾಗಿ ಇಂಗ್ಲೆಂಡಿನ ಸಿವಿಲ್ ಕೋರ್ಟುಗಳು ತೀರ್ಪನ್ನಿತ್ತಿವೆ.

ಕ್ರೈಸ್ತಧರ್ಮದ ವಿಚಾರಸರಣಿಯಂತೆ ಮಾನವನಿಗೆ ತಾನು ಮಾಡುವ ಸಕಲ ಕಾರ್ಯಗಳಿಗೂ ವೈಯಕ್ತಿಕವಾದ ಹೊಣೆಯನ್ನು ತಪ್ಪಿಸಿಕೊಳ್ಳಲು ಬರುವುದಿಲ್ಲ. ತನ್ನ ಸ್ವಯಂಪ್ರೇರಣೆಯಿಂದ ಮಾನವ ದೇವವಿರೋಧಿಯಾಗಿ ನಿಲ್ಲಬಹುದು; ಅದಕ್ಕೆ ಕಾಲದ ಮಿತಿಯೆಂಬುದೇ ಇಲ್ಲ. ಒಮ್ಮೆ ದೇವವಿರೋಧಿಯಾದವ ಎಂದೆಂದೂ ದೇವವಿರೋಧಿಯೇ. ನಿರಂತರ ದಿವ್ಯಜೀವನದಿಂದ ಅವನು ಸಹಜವಾಗಿಯೇ ವಂಚಿತನಾಗಿ ಉಳಿಯುತ್ತಾನೆ. ಅವನ ಶಾಶ್ವತಗತಿಯೇ ನರಕಶಿಕ್ಷೆ. ಮಾನವ ತನ್ನ ಉದ್ಧಾರ ಮಾಡಿಕೊಳ್ಳಲು ಹವಣಿಸದಿದ್ದರೆ ದೇವರು ಕೂಡ ಅವನ ಉದ್ಧಾರವನ್ನು ಮಾಡಲಾರ, ಏಕೆಂದರೆ ಉದ್ಧಾರವೆಂಬ ಪ್ರತಿಕ್ರಿಯೆಯಲ್ಲಿ ಭಗವಂತನನ್ನು ಸ್ವಯಂಪ್ರೇರಣೆಯಿಂದ ಶರಣುಹೋಗುವ ಮನೋವೃತ್ತಿ ಅಂತರ್ಗತವಾಗಿದೆ. ಯಾವನೇ ಒಬ್ಬ ಐತಿಹಾಸಿಕ ಮಾನವ ವ್ಯಕ್ತಿ ನರಕವಾಸಿಯಾಗಿರುವನೆಂದು ಕ್ರೈಸ್ತ ಧರ್ಮಗ್ರಂಥಗಳು ಎತ್ತಿ ಹೇಳುವುದಿಲ್ಲ. ಆದರೆ ಯಾವ ಮಾನವ ಬೇಕಾದರೂ ಸ್ವಯಂಪ್ರವೃತ್ತಿಯಿಂದ, ಅಧರ್ಮಾಚರಣೆಮಾಡಿ ಹೋಗಿ ಸೇರುವ ಅಂತ್ಯಸ್ಥಾನವೇ ಅದೆಂದು ಅವು ಸಾರಿಹೇಳುತ್ತವೆ.

ವಾಸ್ತವವಾಗಿ ಮನುಷ್ಯನ ಗಂತವ್ಯಲಕ್ಷ್ಯ ನರಕವಲ್ಲವಾದ್ದರಿಂದ, ನರಕವಾಸವೆಂಬುದು ಅತ್ಯಂತ ಭೀಕರವಾದ ಯಾತನೆಯಿಂದ ತುಂಬಿರುವುದು ಸಹಜವಾಗುತ್ತದೆ. ನರಕಯಾತನೆಗಳನ್ನು ಕ್ರೈಸ್ತಧರ್ಮದ ಲೇಖಕರು ಎರಡು ಪ್ರಕಾರಗಳಾಗಿ ವಿಂಗಡಿಸುತ್ತಾರೆ-ನಷ್ಟಜನಿತಯಾತನೆ ಮತ್ತು ಕಷ್ಟಜನಿತಯಾತನೆ, ಎಂದು. ದೇವರಿಂದ ಬರುವ ಆತ್ಯಂತಿಕ ವಿಯೋಗವೇ ನಷ್ಟಯಾತನೆ; ಏಕೆಂದರೆ ಮುಂದೆ ಎಂದೆಂದೂ ಮತ್ತೆ ದೇವರನ್ನು ಸೇರುವ ಮಾರ್ಗ ಮುಚ್ಚಿಹೋಗಿರುತ್ತದೆ. ಅಯ್ಯೋ, ದೇವರನ್ನು ಕಳೆದುಕೊಂಡೆನಲ್ಲಾ ಎಂದು ನರಕಜೀವ ಹಳಹಳಿಸುತ್ತದೆ. ತನ್ನ ಮಾನವದೇಹವೂ ಇಲ್ಲವಾಗಿ ಬಗೆಬಗೆಯ ಜೀವಪೀಡೆಗಳಿಗೆ ತುತ್ತಾಗುವ ಅವರ್ಣನೀಯ ಯಾತನೆಯೇ ಕಷ್ಟಜನಿತಯಾತನೆ. ಅಗಾಧವಾಗಿ ಹರಿಯುತ್ತಿರುವ ದೇವರ ಅನುಗ್ರಹವನ್ನು ತಾನಾಗಿಯೇ ಬೇಡವೆಂದು ತಿರಸ್ಕರಿಸಿ ಅಧರ್ಮಕ್ಕೆ ಹಾಯುವ ಗರ್ವಿತ ಮಾನವನಿಗೆ ಮೀಸಲಾಗಿರುವ ಮರಣೋತ್ತರ ದುರ್ಗತಿಯೇ ಈ ನರಕವಾಸ. ಬೈಬಲಿನ ಹೊಸ ಒಡಂಬಡಿಕೆಯ (ಮ್ಯಾಥ್ಯೂ) ಒಂದು ವಚನ ಈ ಅಭಿಪ್ರಾಯಕ್ಕೆ ಆಧಾರವಾಗಿದೆ. ಮಿಕ್ಕ ಕಡೆಗಳಲ್ಲಿ (ಜಾನ್, ರೋಮ್, ಗಾಲ್ ಇತ್ಯಾದಿ) ಹೀಗೆ ನರಕಕ್ಕಿಳಿವ ಜೀವಗಳನ್ನು ವಿನಾಶಕ್ಕೀಡಾದವೆಂದೂ ನಿರ್ಗತಿಕವಾದವೆಂದೂ ಬಣ್ಣಿಸಲಾಗಿದೆ. ಸಾಮಾನ್ಯವಾಗಿ ಇಂಥ ಹತಜೀವಗಳು ಭೀಕರಾಕಾರದ ಬೆಂಕಿಗಳಲ್ಲಿ ಸತತವೂ ಬೇಯುವರೆಂದು ಮೇಲಿಂದಮೇಲೆ ತಿಳಿಸಿ ಹೇಳಲಾಗಿದೆ. 	(ಕೆ.ಕೆ.)

ಎಲ್ಲ ಸಾಹಿತ್ಯಗಳಂತೆ ಪಾಶ್ಚಾತ್ಯ ಸಾಹಿತ್ಯವೂ ಪ್ರಾರಂಭದಲ್ಲಿ ಧರ್ಮದ ಉಪದೇಶದ ಸಾಧನವಾಗಿತ್ತು. ಪ್ರಾರಂಭದಲ್ಲಿ ನರಕದ ಕಲ್ಪನೆ ಸರಳ. ಅದು ಪಾಪಿಗಳು ಸತ್ತ ನಂತರ ಶಿಕ್ಷೆ ಅನುಭವಿಸುವ ಲೋಕ. ಇಟಲಿಯ ಮಹಾಕವಿ ಡಾಂಟೆಯ (1265-1321) `ಡಿವೈನ್ ಕಾಮಿಡಿ' ಮಹಾಕಾವ್ಯದಲ್ಲಿ ನರಕದ ವರ್ಣನೆ 34 ಅಧ್ಯಾಯಗಳಲ್ಲಿದೆ) (ಪ್ರಾಯಶ್ಚಿತ್ತ ಲೋಕ: 33 ಅಧ್ಯಾಯ, ಪರಮಾನಂದ ಲೋಕ 33 ಅಧ್ಯಾಯ) (ಡಾಂಟೆಯು ಹೋಮರ್, ವರ್ಜಿಲ್, ಪ್ಲೇಟೋ ಅರಿಸ್ಟಾಟಲ್ ಎಲ್ಲರನ್ನು ನರಕದಲ್ಲಿರಿಸಿದ. ಏಕೆಂದರೆ ಇವರು ಕ್ರೈಸ್ತರಲ್ಲ. ನರಕದಲ್ಲಿ ಒಂಬತ್ತು ವರ್ತುಲಗಳು ಇಂದ್ರಿಯಾ ನಿಗ್ರಹಿಸಿಲ್ಲದವರು. ಅತಿ ಭೋಗಿಗಳು, ಹಿಂಸೆ ಮಾಡಿದವರು, ಅಲೆಕ್ಸಾಂಡರ್‍ನಂಥ ಕೊಲೆ ಪಾತಕರು ಎಲ್ಲ ನರಕದಲ್ಲಿ ಯಾತನೆ ಪಡುತ್ತಾರೆ. ಭವಿಷ್ಯ ಹೇಳುವವರೂ ನರಕದಲ್ಲಿದ್ದಾರೆ. ಕಡೆಯ ಸುತ್ತಿನಲ್ಲಿ ಲೂಸಿಫರ್ (ಸೈತಾನ) ಇದ್ದಾನೆ. 

ಷೇಕ್ಸ್‍ಪಿಯರನು ಹುಟ್ಟಿದ ವರ್ಷವೇ ಹುಟ್ಟಿದ ನಾಟಕಕಾರ ಕ್ರಿಸ್ಟಫರ್ ಮಾರ್ಲೋನ `ಡಾ. ಫೌಸ್ಟಸ್ ನಾಟಕದಲ್ಲಿ ನರಕ ಭೂಮಿಯಿಂದಾಕೆ ಇರುವ `ಭೌತಿಕ ಲೋಕವೂ ಹೌದು, ಮನಸ್ಥಿತಿಯೂ ಹೌದು. ಷೇಕ್ಸ್‍ಪಿಯರನ `ಮೆಕ್‍ಬೆತ್ ನಾಟಕದಲ್ಲಿ ನರಕ ಒಂದು ಭಯಂಕರ ಮನಸ್ಥಿತಿ. ರಾಜ ಡಂಕನನ ಕೊಲೆ ಮಾಡಿದ ಮೆಕ್‍ಬೆತ್ ಮತ್ತು ಅವನ ಹೆಂಡತಿ ಲೇಡಿ ಮೆಕ್‍ಬೆತ್ ಈ ಭೂಮಿಯಲ್ಲಿ ಇರುವಾಗಲೇ ನರಕದ ಯಾತನೆಯನ್ನು ಅನುಭವಿಸುತ್ತಾರೆ. ಮಿಲ್ಟನನ `ಪಾರಡೈಸ್ ಲಾಸ್ಟ್ ಮಹಾಕಾವ್ಯದಲ್ಲಿ ಸೇರುವನು ಸ್ವರ್ಗದಿಂದ ನರಕಕ್ಕೆ ಬೀಳುತ್ತಾನೆ. ಕಾವ್ಯದ ಪ್ರಾರಂಭದ ಕ್ರಿಯೆ ಅಲ್ಲಿಯೇ ನಡೆಯುತ್ತದೆ. ಎಂದರೆ ಅದೊಂದು ಭೌತಿಕ ಲೋಕ. ಆದರೆ ಅದು ಮನಸ್ಥಿತಿಯೂ ಹೌದು. `ಮೈಸೆಲ್ಫ್ ಆ್ಯಂ ಹೆಲ್!' (ನಾನೇ ನರಕ!} ಎನ್ನುವುದು ಅವನ ಪ್ರಸಿದ್ಧ ಉದ್ಗಾರ.
								(ಪರಿಷ್ಕರಣೆ: ಎಲ್.ಎಸ್.ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ